ಕಾಯವ್ಯ

ದರೋಡೆಕೋರ, ಕಳ್ಳರ ಗುಂಪಿನ ಒಬ್ಬ ಯಜಮಾನ. ಜಾತಿಯಲ್ಲಿ ಬೇಡ. ಕಾಪಚ್ಯನೆಂದೂ ನಾಮಾಂತರವುಂಟು. ನಿಷಾದಸ್ತ್ರೀಯಲ್ಲಿ ಕ್ಷತ್ರಿಯನಿಂದ ಹುಟ್ಟಿದವನಾದ ಈತ ಬ್ರಹ್ಮಕ್ಷತ್ರಗಳನ್ನು ಪಾಲಿಸುತ್ತಿದ್ದು ಶಾಸ್ತ್ರಾರ್ಥವೇತ್ತನೂ ವ್ಯವಹಾರತಜ್ಞನೂ ಆಗಿದ್ದ. ಮಾತಾಪಿತೃಪೂಜೆಯನ್ನು ತನ್ನ ಆದ್ಯ ಕರ್ತವ್ಯವೆಂದು ಈತ ತಿಳಿದಿದ್ದ. ಈತನ ಅನುಯಾಯಿಗಳು ಒಮ್ಮೆ ಈತನನ್ನು ಧರ್ಮರಹಸ್ಯದ ಬಗ್ಗೆ ಕೇಳಿದಾಗ ಸ್ತ್ರೀ, ಬಾಲ, ಬ್ರಹ್ಮ, ತಪಸ್ವಿ, ಗೋ ಮೊದಲಾದುವನ್ನು ಕೊಲ್ಲದೆ ದೇವ, ಬ್ರಾಹ್ಮಣ, ಪಿತೃಗಳನ್ನು ಯಾವಾಗಲೂ ಪೂಜಿಸುತ್ತ, ಲೋಕಶಾಸನಕ್ಕಾಗಿ ದಂಡವನ್ನು ಬಳಸಿಕೊಂಡು ಬಾಳಬೇಕೆಂದೂ ಅಂಥವರು ದಸ್ಯು ವೃತ್ತಿಯಲ್ಲಿದ್ದರೂ ಮೋಕ್ಷ ಪಡೆಯಬಹುದೆಂದೂ ಉಪದೇಶಿಸಿದ.        

(ಎನ್.ಎಸ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ